ಗುಪ್ತರ ವಾಸ್ತು ಮತ್ತು ಶಿಲ್ಪ

	ಭಾರತೀಯ ವಾಸ್ತು ಮತ್ತು ಶಿಲ್ಪಕಲೆಯ ಇತಿಹಾಸದಲ್ಲಿ ಗುಪ್ತರ ಕಾಲವನ್ನು ಸುವರ್ಣಯುಗವೆನ್ನಬಹುದು. ಕ್ರಿ.ಶ. 4ನೆಯ ಶತಮಾನದ ಮಧ್ಯಭಾಗದಿಂದ ಸುಮಾರು ಮೂರು ಶತಮಾನಗಳ ಕಾಲದಲ್ಲಿ ವಿಶಿಷ್ಟವಾದ ಶೈಲಿಯಲ್ಲಿ ನಿರ್ಮಿಸಲ್ಪಟ್ಟ ದೇವಾಲಯಗಳು, ಶಿಲ್ಪಗಳು ಮತ್ತು ಇತರ ಕಲಾಕೃತಿಗಳು ಸೌಂದರ್ಯ ಮತ್ತು ದಿವ್ಯತೆಗಳ ಅಚ್ಚಳಿಯದ ಕುರುಹುಗಳಾಗಿವೆ. ಆ ಕಾಲದ ವಾಸ್ತು ಮತ್ತು ಶಿಲ್ಪಕಾರರು ಕೇವಲ ಹೊರಗಿನ ಚೆಲುವಿಗೆ ಮಹತ್ವವನ್ನೀಯದೆ ಅಂತರಾಳದಲ್ಲಿ ಅಡಗಿದ ದೈವೀಶಕ್ತಿಯ ಪ್ರತೀಕವಾಗಿ ಅನೇಕ ಅನುಪಮ ಕೃತಿಗಳನ್ನು ನಿರ್ಮಿಸಿದರು.

	ವಾಸ್ತು : ಭಾರತದ ಕಟ್ಟಡಗಳ ನಿರ್ಮಾಣದ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದೆನಿಸುವ ಪರಿವರ್ತನೆಯಾದ್ದು ಗುಪ್ತರ ಕಾಲದಲ್ಲಿ. ಅದಕ್ಕೆ ಮೊದಲು ದೇವಾಲಯ ಮತ್ತು ಇತರ ಕಟ್ಟಡಗಳನ್ನು ಹೆಚ್ಚಾಗಿ ಇಟ್ಟಿಗೆಗಳಿಂದ, ಬಂಡೆಗಲ್ಲುಗಳಲ್ಲಿ ಅಥವಾ ಕೆಲವು ನಾಶೀ ವಸ್ತುಗಳಿಂದ ನಿರ್ಮಿಸುವ ವಾಡಿಕೆಯಿತ್ತು. ಕಲ್ಲುಗಳನ್ನು ನಯವಾಗಿ ಕೆತ್ತಿ ಇಟ್ಟಿಗೆಗಳ ಮಾದರಿಯಲ್ಲಿ ಜೋಡಿಸಿ ದೇವಾಲಯಗಳನ್ನು ಕಟ್ಟುವ ಕೌಶಲ ಆರಂಭವಾದ್ದು ಗುಪ್ತರ ಕಾಲದಲ್ಲಿ. ಇದು ಭಾರತೀಯ ಶಿಲ್ಪದ ಇತಿಹಾಸಕ್ಕೆ ಒಂದು ಹೊಸ ಮೆರುಗನ್ನಿತ್ತಿತು. ಅದೇ ಕಾಲದಲ್ಲಿ ಹಿಂದೂ ಧರ್ಮದ ಪುನರುಜ್ಜೀವನವಾಯಿತು. ಆ ಮೊದಲು ಬೌದ್ಧವಾಸ್ತುಶಿಲ್ಪಗಳು ಅಧಿಕವಾಗಿ ನಿರ್ಮಿಸಲ್ಪಡುತ್ತಿದ್ದುವು. ಗುಪ್ತರ ಕಾಲದಲ್ಲೂ ಇವುಗಳ ನಿರ್ಮಾಣವಾಗುತ್ತಿದ್ದರೂ ಹಿಂದೂ ವಾಸ್ತು ಶಿಲ್ಪಗಳು ವೈವಿಧ್ಯಮಯವಾಗಿ ಬೆಳೆದುವು.

	ಗುಪ್ತರ ಕಾಲದ ದೇವಾಲಯಗಳು ಆರಂಭದಲ್ಲಿ ಗರ್ಭಗೃಹ ಮತ್ತು ಸರಳ ರೀತಿಯ ಮುಖಮಂಟಪಗಳನ್ನು ಮಾತ್ರ ತಳೆದಿರುತ್ತಿದ್ದುವು. ಕಾಲಾನುಕ್ರಮದಲ್ಲಿ ಮುಖಮಂಟಪಗಳು ಕಲಶಾಕಾರದ ಅಲಂಕಾರವುಳ್ಳ ಕಂಬಗಳೊಂದಿಗೆ ಬೆಳೆದುವು. ಗರ್ಭಗೃಹದ ಒಳಗೋಡೆಗಳು ನಿರಾಡಂಬರವಾಗಿದ್ದು ಅದರ ಬಾಗಿಲ ಹೊರಮೈ ಕೆತ್ತನೆಯ ವಿಶೇಷ ಅಲಂಕಾರದಿಂದ ಕೂಡಿರುತ್ತಿತ್ತು. ಗರ್ಭಗೃಹದೊಳಗೆ ಸ್ಥಾಪಿಸಲಾದ ಮೂರ್ತಿ ಕೌಶಲಪೂರ್ಣವಾಗಿ ತಯಾರಿಸಲ್ಪಡುತ್ತಿತ್ತು. ದೇವಾಲಯವನ್ನು ಚೌಕಕಾರದ ತಳಪಾಯದ ಮೇಲೆ ಕಟ್ಟಲಾಗುತ್ತಿತ್ತು. ಕೆಲವು ದೇವಾಲಯಗಳ ನಾಲ್ಕೂ ದಿಕ್ಕುಗಳಲ್ಲಿ ಉಪದೇಗುಲಗಳಿರುತ್ತಿದ್ದುವು: ಇವು ಪಂಚಾಯತನ ದೇವಸ್ಥಾನಗಳಾಗಿದ್ದವು. ಉಪದೇಗುಲಗಳ ತಳಪಾಯವೂ ಚೌಕಾಕಾರದ್ದೇ ಆಗಿರುತ್ತಿತ್ತು. ಆರಂಭದಲ್ಲಿ ಗರ್ಭಗೃಹದ ಮೇಲೆ ಚಪ್ಪಟೆಯಾದ ಮಾಳಿಗೆ ಇರುತ್ತಿತ್ತು. ಕ್ರಮೇಣ ಗೋಪುರಾಕಾರದ ಶಿಖರಗಳು ಬಂದುವು. ಗುಪ್ತರ ಕಾಲದ ದೇವಾಲಯಗಳು ಅನಂತರ ಕಾಲದಲ್ಲಿ ರೂಢಿಗೆ ಬಂದ ನಾಗರ ಶೈಲಿಗೆ ಮೂಲಾಧಾರವಾಗಿ ಪರಿಣಮಿಸಿದುವು. ಆ ಕಾಲದ ಅನೇಕ ದೇವಾಲಯಗಳು ಗರ್ಭಗುಡಿಯ ಸುತ್ತಲೂ ಪ್ರದಕ್ಷಿಣಪಥವನ್ನುಳ್ಳವಾಗಿದ್ದುವು. ಆದರೆ ಕೆಲವಕ್ಕೆ ಇವು ಇಲ್ಲ. ಈ ಪ್ರದಕ್ಷಿಣಾಪಥವನ್ನು ಗರ್ಭಗೃಹದ ಸುತ್ತಲೂ ಕಂಬಗಳನ್ನು ನಿಲ್ಲಿಸಲಾಗಿದೆ. ಜಾಲಂದರವುಳ್ಳ ಗೋಡೆಗಳಿಂದಾಗಲಿ ನಿರ್ಮಿಸುತ್ತಿದ್ದರೆಂಬುದಕ್ಕೆ ಹಲವಾರು ನಿದರ್ಶನಗಳು ದೊರೆತಿವೆ. ಅನೇಕ ಕಡೆಗಳಲ್ಲಿ ಇಂಥ ಪ್ರದಕ್ಷಿಣಾಪಥಗಳು ಸಂಪೂರ್ಣ ಅಳಿದುಹೋಗಿವೆ. ದೇವಸ್ಥಾನದ ಗರ್ಭಗುಡಿಯ ಬಾಗಿಲಿನ ಹೊರಮೈ ಅತ್ಯಂತ ಕಲಾವಂತಿಕೆಯಿಂದ ನಿರ್ಮಿಸಲ್ಪಟ್ಟು, ವಿವಿಧ ರೀತಿಯ ರೇಖಾವಿನ್ಯಾಸ, ಮನುಷ್ಯಾಕೃತಿಗಳು, ಮಿಥುನಗಳು, ಪತ್ರಲತೆ, ಶಂಖ, ಚಕ್ರ, ಸ್ವಸ್ತಿಕ, ಮಂಗಲವಿಗ್ರಹಗಳು, ಶ್ರೀವೃಕ್ಷ, ಪೂರ್ಣ ಘಟ, ಗಂಗಾಯಮುನೆಯರು ಮೊದಲಾದ ಶಿಲ್ಪಗಳಿಂದ ಅಲಂಕರಿಸಲ್ಪಟ್ಟ ಲಲಾಟ ಬಿಂಬವನ್ನು ಹೊಂದಿರುತ್ತದೆ.

	ಗುಪ್ತರ ಕಾಲಕ್ಕೆ ಸೇರಿದ, ಭಾಗಶಃ ಬಂಡೆಗಲ್ಲಿನಲ್ಲಿ ಕೆತ್ತಿದ ಅತಿ ಪ್ರಾಚೀನ ದೇವಾಲಯ ಉದಯಗಿರಿಯಲ್ಲಿ (ಮಧ್ಯಭಾರತ) ಇದೆ. ಇದನ್ನು ನಿರ್ಮಿಸಲಾದ್ದು ಸು.401ರಲ್ಲಿ. ದೇವಾಲಯದ ಸ್ವಲ್ಪ ಭಾಗ ಬಂಡೆಗಲ್ಲಿನಲ್ಲಿ ಕೆತ್ತಲ್ಪಟ್ಟಿದ್ದರೂ, ಉಳಿದದ್ದು ಅಂದವಾಗಿ ಕೆತ್ತಿದ ಕಲ್ಲುಗಳಿಂದ ನಿರ್ಮಿತವಾಗಿದೆ. ಕೆತ್ತಿದ ಕಲ್ಲುಗಳನ್ನು ಬಳಸಿ ಅದನ್ನು ನಿರ್ಮಿಸುವ ಘಟ್ಟಕ್ಕೆ ಪರಿವರ್ತನೆಯಾಗುತ್ತಿದ್ದ ಕಾಲದಲ್ಲಿ ಈ ದೇವಾಲಯ ನಿರ್ಮಿತವಾಯಿತು. ಮುಖಮಂಟಪ ಕಂಬಗಳಿಂದ ನಿರ್ಮಿಸಲ್ಪಟ್ಟಿದೆ. ಕಂಬಗಳು ಮತ್ತು ಗರ್ಭಗೃಹದ ಹೊರಭಾಗ ವಾಸ್ತುಕಲಾ ಪ್ರೌಢಿಮೆಯನ್ನು ವ್ಯಕ್ತಪಡಿಸುತ್ತದೆ.

	ಕೆತ್ತಿದ ಬಿಡಿಗಲ್ಲುಗಳನ್ನು ಮಾತ್ರ ಉಪಯೋಗಿಸಿ ನಿರ್ಮಿಸಿದ ದೇವಸ್ಥಾನಗಳಲ್ಲಿ ಸಾಂಚಿಯ 17ನೆಯ ದೇವಸ್ಥಾನ ಪ್ರಾಚೀನತಮವಾದ್ದು. ಈ ಕಾಲದ ಶಿಲಾ ದೇವಾಲಯಗಳು ಉತ್ತರ ಮತ್ತು ಮಧ್ಯಭಾರತ ಅನೇಕ ಕಡೆಗಳಲ್ಲೂ ದಕ್ಷಿಣ ಭಾರತದ ಕೆಲವೆಡೆಗಳಲ್ಲೂ ಉಪಲಬ್ಧವಾಗಿವೆ. ಅವುಗಳಲ್ಲಿ ಮುಖ್ಯವಾದವು ಗೋವಾದ ವಿಷ್ಣು ದೇವಾಲಯ, ಏರಣದ ವಿಷ್ಣು ಮತ್ತು ವರಾಹ ದೇವಾಲಯಗಳು, ಭೂಮರಾದ ಶಿವ ದೇವಾಲಯ, ನಚ್ನಾದ ಪಾರ್ವತಿ ದೇವಾಲಯ, ಸಾಂಚಿಯ ಬೌದ್ಧ ದೇವಾಲಯ, ದೇವಗಡದ (ಉತ್ತರ ಪ್ರದೇಶ) ದಶವತಾರ ದೇವಾಲಯ, ದಾಹ್-ಪರ್ಬತಿಯಾದ (ಅಸ್ಸಾಂ) ದೇವಾಲಯ ಮತ್ತು ಐಹೊಳೆಯ ಲಾಡಖಾನ್, ಗೌಡರ ಗುಡಿ ಮತ್ತು ದುರ್ಗಾ ದೇವಾಲಯಗಳು, ಐಹೊಳೆಯ ದೇವಾಲಯಗಳು ಗುಪ್ತರ ನೇರ ಆಳ್ವಿಕೆಗೆ ಒಳಪಡದಿದ್ದ ಪ್ರದೇಶದಲ್ಲಿದ್ದರೂ ಗುಪ್ತ ದೇವಾಲಯಗಳ ಎಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ. ದುರ್ಗಾ ದೇವಾಲಯ ಗಜಪೃಷ್ಠಾಕೃತಿಯಾಗಿರುವುದು ಗಮನಾರ್ಹ, ತೇರ್ ಮತ್ತು ಚಜರ್ಲಾ (ಆಂಧ್ರ ಪ್ರದೇಶ)ಗಳಲ್ಲಿಯೂ ಗಜಪೃಷ್ಠಾಕೃತಿಯ ದೇವಾಲಯಗಳು ಉಪಲಬ್ಧವಾಗಿವೆ. ಈ ದೇವಾಲಯಗಳ ಮೇಲೆ ಬೌದ್ಧ ಚೈತ್ರಾಲಯಗಳ ಪ್ರಭಾವ ಸ್ಪಷ್ಟವಾಗಿ ತೋರುತ್ತದೆ. ಮೇಲಿನ ದೇವಾಲಯಗಳಲ್ಲದೆ ಭೀತರ್‍ಗಾಂವ್ (ಉತ್ತರ ಪ್ರದೇಶ), ಷಹಾರ್ ಪೂರ್ (ಬಂಗಾಲ), ಸಿರಪೂರ್ (ಮಧ್ಯಭಾರತ) ಮತ್ತು ಬೋಧ್‍ಗಯಾ (ಬಿಹಾರ) ಈ ಸ್ಥಳಗಳಲ್ಲಿ ಆ ಕಾಲದ ಇಟ್ಟಿಗೆಯ ದೇವಾಲಯಗಳು ದೊರೆತಿವೆ. ಇಟ್ಟಿಗೆಗಳನ್ನು ಅಂದವಾದ ರೀತಿಯಲ್ಲಿ ಮಾರ್ಪಡಿಸಿ ಅದಕ್ಕೆ ವಿವಿಧ ರೂಪಗಳನ್ನು ಕೊಡಲಾಗಿದೆ. ಕೆಲವು ಕಮಲದ ದಳಗಳ ಆಕಾರದಲ್ಲಿವೆ; ಇನ್ನು ಕೆಲವದರ ಮೇಲೆ ಪಟ್ಟೆಪಟ್ಟೆಯಾದ ಅಲಂಕಾರ, ಅನೇಕ ರೀತಿಯ ರೇಖಾಚಿತ್ರಣ, ಸರಪಳಿಯಾಕಾರದ ಅಲಂಕಾರದ ಕೆತ್ತನೆ ಮುಂತಾದ ಕಲಾವೈಶಿಷ್ಟ್ಯಗಳು ಕಂಡು ಬರುತ್ತವೆ. ಈ ಎಲ್ಲ ದೇವಾಲಯಗಳೂ ಗುಪ್ತರ ಕಾಲದ ತಳಪಾಯ, ಮುಖ ಮಂಟಪ, ಗರ್ಭಗೃಹದ್ವಾರ, ಶಿಖರ ಈ ವಿಶಿಷ್ಟ ಲಕ್ಷಣಗಳನ್ನುಳ್ಳವಾಗಿವೆ. ಭೀತರ್‍ಗಾಂವ್ ದೇವಾಲಯದಲ್ಲಿ ಭಾರತದ ಪ್ರಾಚೀನತಮ ಕಮಾನನ್ನು ಕಾಣಬಹುದು. ಗೋಪುರಾಕಾರದ ಶಿಖರ ಇರುವ ದೇವಾಲಯಗಳಲ್ಲಿ ದೇವಗಡದ ದೇವಾಲಯ ಪ್ರಾಚೀನತಮವಾದ್ದು.

	ಗುಪ್ತರ ಕಾಲದ ವಾಸದ ಕಟ್ಟಡಗಳು ಸಿಕ್ಕಿಲ್ಲವಾದರೂ, ಅಜಂತ ಗುಹೆಗಳೊಳಗಿನ ಕೆಲವು ಬಣ್ಣದ ಚಿತ್ರಗಳಿಂದ ಅಂದಿನ ಅರಮನೆಗಳು ಹೇಗಿದ್ದುವೆಂಬುದನ್ನು ತಿಳಿಯುವುದು ಸಾಧ್ಯ. ಅವು ಅಷ್ಟು ಭವ್ಯಕಾರದಾಗಿವೆ. ಸಾಮಾನ್ಯ ಎತ್ತರದವಾಗಿರುತ್ತಿದ್ದುವು. ಮಣಿದಂಡವೆಂಬ ನಾಲ್ಕು ಕಂಬಗಳ ಮೇಲೆ ಅವನ್ನು ನಿರ್ಮಿಸಲಾಗುತ್ತಿತ್ತು. ಅವು ಸುವರ್ಣ ಶಿಖರಗಳಿಂದಲೂ ಅವುಗಳ ಮಾಳಿಗೆಗಳು ತೂಗುಬಿಟ್ಟ ಬಂಗಾರದ ಸರಪಣಿಗಳಿಂದಲೂ ಶೋಭಾಯಮನವಾಗಿರುತ್ತಿದ್ದುವು. ಆಸ್ಥಾನ ಮಂಟಪವನ್ನು ರಾಜನ ಸಿಂಹಾಸನ, ಅದರ ಸಮೀಪದಲ್ಲೊಂದು ಪಾದ ಪೀಠ ಮತ್ತು ಉಳಿದ ಆಸನಗಳಿಂದ ಅಲಂಕರಿಸಲಾಗುತ್ತಿತ್ತು. ಇವೆಲ್ಲವೂ ಕಲಾಮಯವಾಗಿದ್ದುವು.

	ಶಿಲ್ಪ: ಆ ಕಾಲದ ಶಿಲ್ಪ ಮಾನವ ಜೀವನದ ಉನ್ನತ ಧ್ಯೇಯದ ಪ್ರತೀಕಗಳಾಗಿವೆ. ಗುಪ್ತರಿಗೆ ಹಿಂದೆ ಆಳಿದ ಕುಷಾನ ಅರಸರ ಕಾಲದ ಶಿಲ್ಪಕ್ಕಿಂತ ಇದು ಹಲವು ವಿಧಗಳಲ್ಲಿ ಬೇರೆಯಾಗಿದೆ. ಆ ಕಾಲದ ಕಲಾನೈಪುಣ್ಯದ ಕುರುಹಾಗಿದೆ. ಅನೇಕ ಬುದ್ಧ ಪ್ರತಿಮೆಗಳೂ ಹಿಂದೂ ಮೂರ್ತಿಗಳು ಕೆಲವು ಸ್ತಂಭಗಳೂ ಇನ್ನುಳಿದ ದೇವಾಯತನಗಳ ಶಿಲ್ಪಗಳೂ ಆ ಜನರ ಜೀವನದ ಸಂಸ್ಕøತಿಯ ಉನ್ನತಮಟ್ಟ ಮತ್ತು ಅಂತಃಶಕ್ತಿಯ ಶ್ರೇಷ್ಠಸಾಕ್ಷ್ಯಗಳಾಗಿವೆ. ಬೇಸ್‍ನಗರದ ಗಂಗಾದೇವಿ, ದೇವಗಡ ದೇವಸ್ಥಾನದ ಬಾಗಿಲಿನ ಚೌಕಟ್ಟಿನಲ್ಲಿ ಕೆತ್ತಿದ ಪ್ರತೀಹಾರರು, ಅದೇ ದೇವಾಲಯದ ಶಿಲ್ಪಗಳಾದ ನರ-ನಾರಾಯಣ, ಅನಂತಶಾಯಿ ವಿಷ್ಣು ಮತ್ತು ಗಜೇಂದ್ರ ಮೋಕ್ಷ, ಕೋಹ್‍ದ ಏಕಮುಖ ಲಿಂಗ ಹಾಗೂ ಗ್ವಾಲಿಯರ್‍ದ ಅಪ್ಸರೆಯರ ಮೂರ್ತಿಗಳು ಶ್ರೇಷ್ಠ ಶಿಲ್ಪಕೃತಿಗಳ ಕೆಲವು ಉದಾಹರಣೆಗಳು.

	ಗುಪ್ತರ ಕಾಲದ ಶಿಲ್ಪ ಕೃತಿಗಳು ಕುಷಾಣರ ಕಾಲದ ಶಿಲ್ಪಗಳ ದೈಹಿಕ ಸೌಂದರ್ಯದಿಂದ ಮತ್ತು ಮಧ್ಯಯುಗದ ಶಿಲ್ಪಗಳ ನೀರಸತೆಯಿಂದ ದೂರವಾಗಿ ದೈವೀ ಸೌಂದರ್ಯವನ್ನು ಹೊರಸೂಸುತ್ತವೆ. ಕುಷಾಣರ ಕಾಲದ ಮೂರ್ತಿಗಳ ನಿರ್ಮಾಣದಲ್ಲಿ ಉಡುಪು ಅಂಗಾಂಗಗಳ ಸೌಷ್ಠವವನ್ನು ಹೊರಚೆಲ್ಲಲು ಉಪಯೋಗಿಸಲ್ಪಟ್ಟಿದ್ದರೆ, ಗುಪ್ತರ ಕಾಲದಲ್ಲಿ ಅದು ಅಂಗಾಂಗಗಳ ಬೆಡಗನ್ನು ಮುಚ್ಚಲು ಉಪಯೋಗಿಸಲ್ಪಟ್ಟಿದೆ. ಅಂಗಾಂಗಗಳ ಹೊರಲಾವಣ್ಯಕ್ಕಿಂತ ಅಂತಃಶಕ್ತಿಗೇ ಆ ಕಾಲದ ಶಿಲ್ಪಕಾರರು ಮಹತ್ವವನ್ನಿತ್ತರೆಂಬುದು ಇದರಿಂದ ಸ್ಪಷ್ಟವಾಗುತ್ತದೆ.

	ಗುಪ್ತರ ಕಾಲದ ಬುದ್ಧಪ್ರತಿಮೆಗಳು ಆಪಾದಮಸ್ತಕಪರ್ಯಂತ ಕಲೆಯ ಪ್ರೌಢಿಮೆಯನ್ನು ವ್ಯಕ್ತಪಡಿಸುತ್ತದೆ. ತಲೆಯ ಕೂದಲು ಉಂಗುರುಗಳಂತೆ ಸುರುಳಿ ಸುರುಳಿಯಾಗಿ ರಚಿಸಲ್ಪಟ್ಟಿದೆ. ಆ ಕಾಲದ ಬುದ್ಧ ಪ್ರತಿಮೆಗಳಲ್ಲಿ ಮುಖ್ಯವಾಗಿ ಸಾರನಾಥ ಮತ್ತು ಮಥುರಾದ ಶಿಲಾಪ್ರತಿಮೆಗಳನ್ನೂ ಉದಾಹರಿಸಬಹುದು. ಜೀವ ವಿಮೋಚನಾ ಮಾರ್ಗದ ಜ್ಞಾನವನ್ನು ಬೋಧಿಸುವಂತಿರುವ ಸಾರನಾಥ ಬುದ್ಧ ಪ್ರತಿಮೆ ಭಾರತೀಯ ಶಿಲ್ಪಕಲಾ ನೈಪುಣ್ಯಕ್ಕೆ ಒಂದು ಉತ್ತಮ ಉದಾಹರಣೆ. ವಿರಕ್ತಿ, ಅಂತಃಶುದ್ಧಿ ಮತ್ತು ಮಾನವ ಕಲ್ಯಾಣ ಈ ಮೂರ್ತಿಗಳಲ್ಲಿ ಅಡಕವಾಗಿರುವಂತೆ ಗೋಚರಿಸುತ್ತದೆ.

	ಸಾರನಾಥ ಮತ್ತು ಮಥುರಾದ ಬುದ್ಧ ಮೂರ್ತಿಗಳ ಉಡುಪುಗಳು ಪಾರದರ್ಶಕದಂತಿವೆ. ಆದರೆ ಸಾರನಾಥ ಮೂರ್ತಿಯ ಹೊದಿಕೆ ಅಂದವಾಗಿ ರೂಪಿಸಿದ ನಿರಿಗೆಗಳುಳ್ಳದ್ದು. ಕುಷಾನರ ಮತ್ತು ಗುಪ್ತರ ಕಾಲದ ಬುದ್ಧ ಮೂರ್ತಿಗಳಲ್ಲಿ ಅನೇಕ ವ್ಯತ್ಯಾಸಗಳುಂಟು. ಕುಷಾಣರ ಕಾಲದ ಮೂರ್ತಿಯ ಪ್ರಭಾವಳಿ ಸರಳವಾಗಿ ಅಂಚಿನಲ್ಲಿ ಮಾತ್ರ ಚಿಪ್ಪಿನಾಕಾರದ ಚಿಹ್ನೆಗಳ ಚಿತ್ರಣದಿಂದ ಕೂಡಿದ್ದಾದರೆ, ಗುಪ್ತರ ಕಾಲದ ಮೂರ್ತಿಗಳು ಪ್ರಭಾವಳಿಯಲ್ಲಿ ಅನೇಕ ಸೂಕ್ಷ್ಮ ಕೆತ್ತನೆಗಳಿವೆ. ಮಥುರಾದ ಪ್ರತಿಮೆಗಳ ಪ್ರಭಾವಳಿ ಪೂರ್ಣ ಅರಳಿದ ಕಮಲದಂತಿದ್ದು, ನಿಕರೇಖಾವಿನ್ಯಾಸ, ಚೌಕು ಪಟ್ಟಿಗಳು, ನವಿಲಿನ ಚಿತ್ರಗಳಿಂದ ಅಲಂಕೃತವಾದ ಪತ್ರಲತೆ, ಮಣಿಗಳ ಸರದಂತಿರುವ ಮತ್ತು ಚಿಪ್ಪಿನ ಆಕಾರದ ಚಿಹ್ನೆಗಳ ಹಾರಗಳಂತಿರುವ ಕೆತ್ತನೆಗಳಿಂದ ಅಲಂಕೃತವಾದ ಅಂಚು ಇವುಗಳಿಂದ ಕಂಗೊಳಿಸುತ್ತದೆ. ಈ ಪ್ರಭಾವಳಿ ಪೂರ್ವದಲ್ಲಿ ವರ್ಣರಂಜಿತವಾಗಿತ್ತೆಂಬುದಕ್ಕೆ ಇನ್ನೂ ಅಲ್ಲಲ್ಲಿ ಉಳಿದಿರುವ ಬಣ್ಣದ ಗುರುತುಗಳು ಸಾಕ್ಷಿಯಾಗಿವೆ. ಕುಷಾಣರ ಕಾಲದ ಆಸನಸ್ಥ ಬುದ್ಧ ಪ್ರತಿಮೆಗಳ ಹಿಂಭಾಗದಲ್ಲಿ, ಕುಳಿತಿರುವ ಭಂಗಿಯಲ್ಲಿ ಮನುಷ್ಯ ಚಿತ್ರಗಳಿದ್ದರೆ ಗುಪ್ತರ ಕಾಲದ ಪ್ರತಿಮೆಗಳ ಹಿನ್ನಲೆಯಲ್ಲಿ ಮೇಲಕ್ಕೆ ನೆಗೆದು ತೇಲುವಂತಿರುವ ಮನುಷ್ಯ ಚಿತ್ರಗಳಿವೆ. ಕುಷಾಣರ ಕಾಲದ ಪ್ರತಿಮೆಗಳ ಹಿನ್ನಲೆಯಲ್ಲಿ ಇದನ್ನು ಚಿತ್ರಿಸಿಲ್ಲ. ಅದೇ ರೀತಿ ಕುಷಾಣರ ಕಾಲದ ಮೂರ್ತಿಗಳ ಹಿನ್ನಲೆಯಲ್ಲಿ ಇವಿಲ್ಲ. ಕುಷಾಣರ ಕಾಲದ ಮೂರ್ತಿಗಳ ಹುಬ್ಬುಗಳ ಮಧ್ಯದಲ್ಲಿ ಊರ್ಣವೆಂಬ ಉಬ್ಬು ಬಿಂಬವಿರುತ್ತದೆ. ಗುಪ್ತ ಮೂರ್ತಿಯಲ್ಲಿ ಇದು ಇಲ್ಲ. ಕುಷಾಣರ ಕಾಲದ ಮೂರ್ತಿಗಳು ಕಣ್ಣುಗಳು ವಿಶಾಲವೂ ಅರ್ಧ ತೆರೆದವೂ ಆಗಿ ದೃಷ್ಟಿ ಮೂಗಿನತ್ತ ಕೇಂದ್ರಿಕೃತವಾಗಿದೆ; ಅವು ಅಂತರ್ಮುಖಿಯಾದಂತೆ ತೋರುತ್ತದೆ. ಸಾಮಾನ್ಯವಾಗಿ ಗುಪ್ತರ ಕಾಲದ ಬುದ್ಧ ಮೂರ್ತಿಗಳ ಪೈಕಿ ಮಂಕೌರದ (ಅಲಹಾಬಾದ್ ಜಿಲ್ಲೆ) ಬುದ್ಧ ಪ್ರತಿಮೆ ಮಾತ್ರ ಬೇರೆ ಲಕ್ಷಣಗಳನ್ನುಳ್ಳದ್ದಾಗಿದೆ. ಕುಷಾಣರ ಕಾಲದ ಬುದ್ಧ ಪ್ರತಿಮೆಗಳಂತೆ ಈ ಪ್ರತಿಮೆಯ ತಲೆ ಬೋಳಾಗಿ ಮತ್ತು ದೇಹ ಬೃಹದಾಕಾರದ್ದಾಗಿದ್ದು ಸ್ನಾಯುಗಳು ಎದ್ದು ಕಾಣುವಂತೆ ಇವೆ.

	ಹಿಂದೂ ಪುರಾಣಗಳ ಕೆಲವು ಸನ್ನಿವೇಶಗಳನ್ನೊಳಗೊಂಡ ಶಿಲ್ಪಗಳಲ್ಲಿ ಲಖನೌ ವಸ್ತುಸಂಗ್ರಹಾಲಯದಲ್ಲಿರಿಸಲಾಗಿರುವ ಒಂದು ಶಿಲ್ಪ ಉಲ್ಲೇಖಾರ್ಹವಾದ್ದು. ಇದು ಭೀಮಸೇನ ಮತ್ತು ಜರಾಸಂಧರ ಮಲ್ಲಯುದ್ಧದ ದೃಶ್ಯವನ್ನು ಚಿತ್ರಿಸುವ ಅನುಪಮ ಶಿಲ್ಪಕಲಾಕೃತಿ. ಗರ್ಹ್‍ವಾದಲ್ಲಿ (ಮಧ್ಯಭಾರತ) ದೊರೆತ ಒಂದು ದ್ವಾರದ ಮೇಲೆ ಸುಂದರವಾದ ಎಲೆಗಳಿಂದ ಕೂಡಿದ ಬಳ್ಳಿಯನ್ನು ಪುರುಷರು ಮತ್ತು ಸ್ತ್ರೀಯರು ಏರುತ್ತಿರುವಂತೆ ಅಥವಾ ಅದರ ಮೇಲೆ ಕುಳಿತಿರುವಂತೆ ಚಿತ್ರವಿದೆ. ಅದರಂತೆಯೇ ಸಾರನಾಥದ ಧಾಮೆಕ್ ಸ್ತೂಪದ ಪಶ್ಚಿಮ ಭಾಗದಲ್ಲಿ ಕೆತ್ತಲಾದ ಪತ್ರಲತೆ ಅತ್ಯಂತ ಸುಂದರವಾದ್ದು. ಇಂಥ ಭಾರತೀಯ ಭಿತ್ತಿಚಿತ್ರಗಳ ಒಂದು ಉತ್ತಮ ನಿದರ್ಶನ.

	ಆ ಕಾಲದ ಕಾಲವೈಶಿಷ್ಟ್ಯವನ್ನು ಪ್ರಕಟಿಸುವ ಕೆಲವು ಸ್ತಂಭಗಳು ಅಲ್ಲಲ್ಲಿ ಉಪಲಬ್ದವಾಗಿವೆ. ಅವುಗಳಲ್ಲಿ ಏರಣದ ಶಿಲಾಸ್ತಂಭ ಮತ್ತು ದಿಲ್ಲಿಯ ಕುತುಬ್-ಮಿನಾರಿನ ಸಮೀಪದಲ್ಲಿರುವ ಕಬ್ಬಿಣದ ಕಂಬ ಇವು ಉಲ್ಲೇಖಾರ್ಹ. ಏರಣದ ಸ್ತಂಭ 484-485ರ ಸುಮಾರಿಗೆ ನಿರ್ಮಿಸಲ್ಪಟ್ಟಿದ್ದು. ಇದು ಅನೇಕ ಮುಖವುಳ್ಳದ್ದಾಗಿದೆ. ಮೇಲ್ಭಾಗದಲ್ಲಿ ಸಿಂಹದ ಪ್ರತಿಮೆಯುಳ್ಳ ಚೌಕಟ್ಟನ್ನುಳ್ಳದ್ದಾಗಿ, ಅಶೋಕನ ಶಿಲಾಸ್ತಂಭಗಳ ಚಿತ್ರಣವನ್ನು ಕಣ್ಣೆದುರಿಗಿರಿಸುತ್ತದೆ. ಈ ಕಂಬದ ಎತ್ತರ 43 ಅಡಿ. ಆದರೆ ಅಶೋಕನ ಶಿಲಾಸ್ತಂಭಗಳ ಭವ್ಯತೆ ಇದಕ್ಕಿಲ್ಲ. ವಿಷ್ಣುವಿನ ಮೂರ್ತಿಯನ್ನು ಇದರ ಮೇಲೆ ಸ್ಥಾಪಿಸುವ ಉದ್ದೇಶದಿಂದ ಈ ಸ್ತಂಭವನ್ನು ನಿರ್ಮಿಸಲಾಯಿತೆಂಬುದು ವಿದ್ವಾಂಸರ ಅಭಿಪ್ರಾಯ. ದಿಲ್ಲಿಯ ಕಂಬದ ವೈಶಿಷ್ಟ್ಯವೆಂದರೆ ಅದನ್ನು ನಿರ್ಮಿಸಲು ಕಬ್ಬಿಣವನ್ನು ಉಪಯೋಗಿಸಿದ್ದು. ಇಂಥ ಕಲಾಕೃತಿಗಳಿಗಾಗಿ ಕಬ್ಬಿಣವನ್ನು ಉಪಯೋಗಿಸುವ ಮಟ್ಟಿಗೆ ಶಿಲಾಶಾಸ್ತ್ರದ ಪ್ರಗತಿಯಾಯಿತೆಂಬುದು ಇದರಿಂದ ವ್ಯಕ್ತವಾಗುತ್ತದೆ. ಈ ಕಂಬದ ಎತ್ತರ 23' 8". 415ರ ಸುಮಾರಿಗೆ ಇದನ್ನು ನಿರ್ಮಿಸಲಾಯಿತು. ಇದನ್ನು ನಿಲ್ಲಿಸಿದಾಗ ಇದರ ಮೇಲೆ ಗರುಡ ವಿಗ್ರಹವಿತ್ತು.											(ಎಂ.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ